ಅಧಿಕಾರ ಸ್ವೀಕರಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ ಭಂಡಾರಿ

ಅಧಿಕಾರ ಸ್ವೀಕರಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ ಭಂಡಾರಿ

ತುಳುಭಾಷೆ, ಸಂಸ್ಕೃತಿ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಸಮಸ್ತರನ್ನು ಒಗ್ಗೂಡಿಸಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಎ. ಸಿ ಭಂಡಾರಿ ಹೇಳಿದರು.

ನಗರದ ಉರ್ವಾಸ್ಟೋರಿನ ತುಳುಭವನದ ತುಳುಚಾವಡಿಯಲ್ಲಿ ನಡೆದ ಪದ ಸ್ವೀಕಾರ ಕಾರ್ಯಕ್ರಮದಲ್ಲಿ ಅಕಾಡೆಮಿಯ ನೂತನ ಅಧ್ಯಕ್ಷ ಪದವಿ ಸ್ವೀಕರಿಸಿ ಅವರು ಮಾತನಾಡಿದರು.

 

ಈಗಾಗಲೇ ಅಕಾಡೆಮಿಯ ನೂತನ ಸದಸ್ಯರ ಜತೆಗೆ ಸಮಾಲೋಚನೆ ನಡೆಸಿ ಅಕಾಡೆಮಿಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಾಗಿದೆ. ತುಳು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಸ್ಥಳೀಯವಾಗಿ ತುಳು ಸಾಹಿತಿಗಳನ್ನು ವಿದ್ವಾಂಸರ, ಜಾನಪದ ತಜರ, ಕಲಾವಿದರ ಸಾಧನೆ, ಸೇವೆಯನ್ನು ಗುರುತಿಸುವ ಜತೆಗೆ ತುಳುಭಾಷೆ, ಸಂಸ್ಕೃತಿಯ ಅಭಿವೃದ್ಧಿಯ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು. ಮಕ್ಕಳಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.

ತುಳುಭಾಷೆಯ ಸೇವೆ ನನ್ನ ಗುರಿ, ಸರ್ವ ಸದಸ್ಯರ ಸಹಕಾರ, ಸಮಸ್ತ ತುಳುವರ ಬೆಂಬಲದೊಂದಿಗೆ ಈ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬಲ್ಲೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದವರು ಹೇಳಿದರು.

ತುಳುಭಾಷೆ, ಸಂಸ್ಕೃತಿ, ಸಾಹಿತ್ಯ ಸೇವೆಯಲ್ಲಿ ತುಳು ಅಕಾಡೆಮಿ ನಿರಂತರ ಶ್ರಮಿಸುತ್ತಾ ಬಂದಿದೆ. ಈ ಕಾರ್ಯಕಕ್ಕೆ ಇನ್ನಷ್ಟು ಒತ್ತು ನೂತನ ಅಕಾಡೆಮಿ ಹಾಗೂ ಸದಸ್ಯರಿಂದ ಆಗಲಿ ನೂತನ ಅಧ್ಯಕ್ಷ ಎ. ಸಿ ಭಂಡಾರಿ ಅವರು ತುಳು ಸಂಘಟಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅನುಭವನ ಹೊಂದಿದ್ದಾರೆ. ಅವರ ಜತೆಗೆ ಒಳ್ಳೆಯ ಸದಸ್ಯ ತಂಡವಿದೆ. ಅ ಅವಧಿಯಲ್ಲಿ ಅಕಾಡೆಮಿಯಿಂದ ಇನ್ನಷ್ಟು ನೂತನ ಕಾರ್ಯ ಯೋಜನೆಗಳು ಮೂಡಿ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾರೈಸಿದರು.

ಹಂಪಿ ವಿ. ವಿ ವಿಶ್ರಾಂತ ಕುಲಪತಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ವಿವೇಕ ರೈ ಅವರು ಮಾತನಾಡಿ, ತುಳು ಅಕಾಡೆಮಿಯ 8ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡಿರುವ ಎ. ಸಿ. ಭಂಡಾರಿ ಅವರ ಅವಧಿಯಲ್ಲಿ ತುಳುಭಾಷೆ ಸಂವಿಧಾನದ 8ನೇ ಪರಿಚ್ಚೇದದಲ್ಲಿ ಸೇರ್ಪಡೆಗೊಳ್ಳುವ ಸಮಸ್ತ ತುಳುವರ ಕನಸು ಸಾಕಾರಗೊಳ್ಳುವಂತಾಗಲಿ ಎಂದು ಹಾರೈಸಿದರು.

ನಿರ್ಗಮನ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅವರು ಚೆನ್ನೆಮಣೆಯನ್ನು ನೂತನ ಅಧ್ಯಕ್ಷರಿಗೆ ನೀಡಿ ಅಧಿಕಾರ ಹಸ್ತಾಂತರಿ ಶುಬ ಕೋರಿದರು.

 

ಶಾಸಕರಾದ ಕೆ. ಅಭಯಚಂದ್ರ, ಬಿ. ಎ ಮೊೈದಿನ್ ಬಾವಾ, ಮೇಯರ್ ಕವಿತಾ ಸನಿಲ್, ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ| ವಾಮನ ನಂದಾವರ, ಸೀತಾರಾಮ ಕುಲಾಲ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅ.ಭಾ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಮುಂಬಯಿಯ ಐಕಳ ಹರೀಶ್ ಶೆಟ್ಟಿ, ಮನಪಾ ಸಚೇತಕ ಶಶಿಧರ ಹೆಗ್ಡೆ ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್ ಶುಭ ಹಾರೈಸಿದರು.

ಅಕಾಡೆಮಿ ನೂತನ ಸದಸ್ಯರಾದ ಸುಧಾ ನಾಗೇಶ್, ವಿಜಯ ಶೆಟ್ಟಿ, ತಾರಾನಥ ಗಟ್ಟಿ, ಗೋಪಾಲ ಅಂಚನ್, ವಿದ್ಯಾಶ್ರೀ ಎಸ್, ದುರ್ಗಾಮೆನನ್, ಶಿವಾನಂದ ಕರ್ಕೇರಾ, ಬೆನೆಟ್ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು, ಡಾ| ವಾಸುದೇವ ಬೆಳ್ಳೆ, ನಿರಂಜನ ರೈ ಮಠಂತಬೆಟ್ಟು, ಡಾ| ವೈ. ಎನ್. ಶೆಟ್ಟಿ ಉಪಸ್ಥಿತರಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಸ್ವಾಗತಿಸಿದರು. ಮಾಜಿ ಸದಸ್ಯ ಡಿ. ಎಂ ಕುಲಾಲ್ ನೂತನ ಅಧ್ಯಕ್ಷರ ಪರಿಚಯ ಮಾಡಿದರು. ದುರ್ಗಾಪ್ರಸಾದ್ ರೈ ಕುಂಬ್ರ ನಿರೂಪಿಸಿದರು.