ಕಾಶ್ಮೀರದಿಂದ ಕನ್ಯಾಕುಮಾರಿಗೆ ತುಳುನಾಡ ಧ್ವಜಧಾರಿಯಾಗಿ ಸೈಕಲ್ ಪ್ರಯಾಣ ಪ್ರಸಾದ್ ವಿಜಯ ಶೆಟ್ಟಿ

ಕಾಶ್ಮೀರದಿಂದ ಕನ್ಯಾಕುಮಾರಿಗೆ ತುಳುನಾಡ ಧ್ವಜಧಾರಿಯಾಗಿ ಸೈಕಲ್ ಪ್ರಯಾಣ ಪ್ರಸಾದ್ ವಿಜಯ ಶೆಟ್ಟಿ

ಮಂಗಳೂರು: ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಲು ತುಳುನಾಡಿನ ಯುವಕರು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ತುಳುನಾಡಿನ ಧ್ವಜಧಾರಿಯಾಗಿ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸೈಕಲ್ ಸವಾರಿ ನಡೆಸಿರುವುದು ಶ್ಲಾಘನಾರ್ಹ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ಅವರು ಹೆಳಿದರು.
ಮಂಗಳೂರು ತಾಲೂಕಿನ ನೆಲ್ಲಿಕಾರು ಪ್ರದೇಶದ ಪ್ರಸಾದ್ ವಿಜಯ ಶೆಟ್ಟಿ ಎಂಬ 26 ವರ್ಷದ ಯುವಕ 19 ದಿನಗಳಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ತುಳುನಾಡಿನ ಧ್ವಜ ಪ್ರದರ್ಶಿಸುತ್ತಾ ಸೈಕಲ್ ಸವಾರಿ ಮಾಡುತ್ತಾ ಎಪ್ರಿಲ್ 8 ರಂದು ಮಂಗಳೂರು ತಲುಪಿದಾಗ ಉರ್ವಸ್ಟೋರ್ ತುಳುಭವನದಲ್ಲಿ ಅಕಾಡೆಮಿಯ ವತಿಯಿಂದ ಸಾಂಪ್ರಾದಾಯಕವಾಗಿ ಸ್ವಾಗತಿಸಿ ಅಭಿನಂದಿಸಿ ಅಧ್ಯಕ್ಷರು ಮಾತನಾಡುತ್ತಿದ್ದರು.
2500 ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಗೆ ದೇಶದ ಸಂವಿಧಾನದಲ್ಲಿ ಮಾನ್ಯತೆ ದೊರಕಿಲ್ಲ. ಇತ್ತಿಚೆಗಿನ ದಿನಗಳಲ್ಲಿ ಸಾಂವಿಧಾನಿಕ ಮಾನ್ಯತೆಗಾಗಿ ವಿವಿಧ ರೀತಿಯಲ್ಲಿ ಒತ್ತಡ ಹಾಕಲಾಗುತ್ತಿದೆ. ತುಳುನಾಡಿನ ಜನತೆ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಭಾಷಾ ಮಾನ್ಯತೆಗಾಗಿ ಶ್ರಮಿಸುತ್ತಿದ್ದಾರೆ. ಯುವಕರು, ಸಾಹಿತಿಗಳು, ಸಂಘಟಕರು, ಹೋರಾಟಗಾರರು ತಮ್ಮದೇ ಆದ ರೀತಿಯಲ್ಲಿ ತುಳುನಾಡಿನ ಸ್ವಾಭಿಮಾನ ರಕ್ಷಣೆ ಮಾಡುತ್ತಿದ್ದಾರೆ. ಅಕಾಡೆಮಿ ವತಿಯಿಂದ ಕಾನೂನಿನ ಚೌಕಟ್ಟಿಗೆ ಒಳಪಟ್ಟು ಸಹಕಾರ ನೀಡಲಾಗುತ್ತಿದೆ. ಎಲ್ಲರೂ ಒಂದಾಗಿ ಒಂದೇ ಉದ್ದೇಶಕ್ಕೆ ಚಳವಳಿ ನಡೆಸಿದಾಗ ಯಶಸ್ಸು ಸಿಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ಪ್ರಯತ್ನಿಸುತ್ತಿದೆ ಎಂದು ಎ.ಸಿ ಭಂಡಾರಿ ಹೇಳಿದರು.
ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ| ವಾಮನ ನಂದಾವರ, ಸದಸ್ಯರಾದ ಡಾ| ವೈ.ಎನ್ ಶೆಟ್ಟಿ, ಡಾ| ವಾಸುದೇವ ಬೆಳ್ಳೆ, ಶ್ರೀಮತಿ ಸುಧನಾಗೇಶ್, ರಿಜಿಸ್ಟ್ರಾರ್ ಶ್ರೀ ಚಂದ್ರಹಾಸ ರೈ.ಬಿ ಹಾಗೂ ತುಳು ಅಭಿಮನಿಗಳು ಭಾಗವಹಿಸಿದ್ದರು.