ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿಜೇತರ ಆಯ್ಕೆ

ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿಜೇತರ ಆಯ್ಕೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೧೨ನೇ ಸಾಲಿನ
ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತರ ಆಯ್ಕೆ
ಪ್ರಕಟಣೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೧೨ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಅಕಾಡೆಮಿಯಲ್ಲಿ ದಿನಾಂಕ ೧೨-೪-೨೦೧೩ ರಂದು ಜರುಗಿದ ಸರ್ವ ಸದಸ್ಯರ ಸಮಿತಿ ಸಭೆಯಲ್ಲಿ ಆಯ್ಕೆಗಳನ್ನು ಮಾಡಲಾಗಿದೆ.

ಗೌರವ ಪ್ರಶಸ್ತಿ :

ತುಳು ಭಾಷೆ, ಸಾಹಿತ್ಯ ಮತ್ತು ಕಲೆಯ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಗಣ್ಯರನ್ನು ಅಕಾಡೆಮಿಯ ೨೦೧೨ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು ರೂ.೧೦,೦೦೦-೦೦ ನಗದು, ಶಾಲು, ಹಾರ, ಫ಼ಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.

1 ತುಳು ಸಾಹಿತ್ಯ ಕ್ಷೇತ್ರ ಶ್ರೀಮತಿ ಜಯಂತಿ ಎಸ್ ಬಂಗೇರ ಪ್ರಾಯ ೫೬
2 ತುಳು ನಾಟಕ ಕ್ಷೇತ್ರ ಶ್ರೀ ರೋಹಿದಾಸ್ ಕದ್ರಿ ಪ್ರಾಯ ೭೦
3 ತುಳು ಸಿನಿಮಾ ಕ್ಷೇತ್ರ ಶ್ರೀ ರಿಚಾರ್ಡ್ ಕ್ಯಾಸ್ತಲಿನೊ ಪ್ರಾಯ ೬೯

ಪುಸ್ತಕ ಬಹುಮಾನ:

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೧೨ನೇ ಸಾಲಿನ ಈ ಕೆಳಗಿನ ಲೇಖಕರ ಕೃತಿಗಳನ್ನು ಬಹುಮಾನ ನೀಡಲು ಆಯ್ಕೆ ಮಾಡಲಾಗಿದೆ. ಈ ಪುಸ್ತಕ ಬಹುಮಾನವು ರೂ.೫,೦೦೦-೦೦ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ.

ಕ್ರ.ಸಂ. ಪುಸ್ತಕ ಪ್ರಕಾರ ಕೃತಿಯ ಹೆಸರು ಲೇಖಕರು
1 ತುಳು ಕಥಾ ವಿಭಾಗ ಸತ್ಯಪ್ಪೆ ಬಾಲೆಲು ಶ್ರೀ ಕೆ. ಇ ರಾಧಕೃಷ್ಣ
2 ತುಳು ಕವನ ವಿಭಾಗ ಕೊರಲ್ ಶ್ರೀ ಸಿಮಂತೂರು ಚಂದ್ರಹಾಸ ಸುವರ್ಣ
3 ತುಳು ಅಧ್ಯಯನ ವಿಭಾಗ ತುಳುನಾಡಿನ ಬಿಲ್ಲವರು ಶ್ರೀ ರಮಾನಾಥ ಕೋಟೆಕಾರ್

ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಜುಲಾಯಿ ತಿಂಗಳ ಪ್ರಥಮ ವಾರದಲ್ಲಿ ನಡೆಯಲಿರುವುದು.

ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ

ಶ್ರೀಮತಿ ಜಯಂತಿ ಎಸ್ ಬಂಗೇರ (ಸಾಹಿತ್ಯ ಕ್ಷೇತ್ರ)

೧೯೫೭ ರ ಮಾರ್ಚ್ ೧೫ ರಂದು ಲೋಕು ಸಾಲಿಯಾನ್ ಮತ್ತು ಭಾಗೀರಥಿ ದಂಪತಿಗಳ ಮಗಳಾಗಿ ಜನಿಸಿದರು. ಇವರ ವಿದ್ಯಾಭ್ಯಾಸ ೭ನೇ ತರಗತಿ ತನಕ. ಇವರ ‘ಎನ್ನಂದಿ ಭಾಗ್ಯ’ ನಾಟಕ ಕೃತಿಗೆ ೧೯೭೯ ರಲ್ಲಿ ಮೂಡಬಿದ್ರೆಯ ಪ್ರಥಮ ಮಹಿಳಾ ಪಾರಿತೋಷಕ ಪ್ರಶಸ್ತಿ ದೊರಕಿತು. ೧೯೬೫ ರಲ್ಲಿ ಮಚ್ಚೇಂದ್ರನಾಥ್ ಪಾಂಡೇಶ್ವರ ಇವರು ಬರೆದ ‘ನೆತ್ತೆರಾ? ನೀರಾ? ಎಂಬ ನಾಟಕದಲ್ಲಿ ಅಭಿನಯಿಸಿದ ಇವರು ಪ್ರಭುದ್ದ ನಟಿ ಎಂಬುದನ್ನು ದೃಢಪಡಿಸಿದ್ದಾರೆ. ಇವರ ಸಣ್ಣ ಕತೆಗಳು, ತುಳು ಪತ್ರಿಕೆಗಳಾದ ತುಳುವೆರೆ ತುಡರ್ ಹಾಗೂ ಮದಿಪು ಸಂಚಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇದೆ. ‘ಮಿಡಿದ ಕಂಬನಿ’, ಕನ್ನಡ ‘ಗೋರಿ’ ಎಂಬ ತುಳು ಕಾದಂಬರಿಯನ್ನು ಬರೆದಿದ್ದಾರೆ. ಇವರು ಉಡಲ್ ಎಂಬ ತ್ರೈಮಾಸಿಕ ಪತ್ರಿಕೆ ಪ್ರಕಟಿಸುತ್ತಿದ್ದ್ದಾರೆ.

ಇವರು ಪ್ರಕಟಿಸಿದ ಪುಸ್ತಕಗಳು ‘ಮನಸ್ಸ್ ಬದಲಾನಗ’, (ತುಳು ಕಥಾ ಸಂಕಲನ) ‘ಸತ್ಯ ನೆಗಪುನಗ’, (ತುಳು ಜಾನಪದ ನಾಟಕ) ‘ಸೊರಗೆದ ಪೂ’, (ತುಳು ಕಾದಂಬರಿ) ‘ನೀಲಿ ಕಡಲ್ದ ನಡುಟು’, (ತುಳು ಕಥಾ ಸಂಕಲನ) ‘ಸುರಗಿಯ ಹೂವು’, (ತುಳುವಿನಿಂದ ಕನ್ನಡಕ್ಕೆ ಅನುವಾದ) ‘ಎದುರು ಕತೆಕ್ಕುಲು’, (ಸಂಗ್ರಹ) ‘ಗೋರಿ’, ‘ಗಗ್ಗರ’, ಕಾದಂಬರಿಗಳನ್ನು ರಚಿಸಿರುತ್ತಾರೆ. ನಾಟಕಗಳು ‘ಅರ್ಥ ಆವಂದಿ ಪಾತೆರ’, ‘ಸವಿತನ ಮದ್ಮೆ’, ‘ಎನ್ನಂದಿ ಭಾಗ್ಯ’, ‘ರಾಪುನ ಪಾಂತೆ’, ‘ಸತ್ಯ ನೆಗಪುನಗ’, ‘ಮಾಯಿದ ಪುಣ್ಣಮೆ’, ‘ಪೂಜೆದ ಪೂ’, ‘ಬಿನ್ನೆರೆ ಗೌಜಿ’, ‘ಮಾಪು ಮಲ್ಪುಲೆ’ ಎಂಬ ನಾಟಕವನ್ನು ರಚಿಸಿರುತ್ತಾರೆ. ಇವರ ‘ಮನಸ್ಸ್ ಬದಲಾನಗ’ ತುಳು ಕೃತಿಗೆ ೧೯೯೮ ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಬಹುಮಾನ ಲಭಿಸಿರುತ್ತದೆ.

ಶ್ರೀ ರೋಹಿದಾಸ್ ಕದ್ರಿ (ನಾಟಕ ಕ್ಷೇತ್ರ)

೧೯೪೩ ಜುಲಾಯಿ ೧೨ ರಂದು ಲಿಂಗಪ್ಪ ರಾವ್ ಮತ್ತು ಪದ್ಮಾವತಿ ದಂಪತಿಗಳ ಮಗನಾಗಿ ಜನಿಸಿದರು. ಇವರು ಸುಮಾರು ೫೫ ವರ್ಷಕ್ಕಿಂತಲೂ ಹೆಚ್ಚು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಲಾಸೇವೆ ಮಾಡಿದವರು. ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಪಾತ್ರಗಳಿಗೆ ಇವರು ಜೀವ ತುಂಬಿ ಅಭಿನಯಿಸುವ, ನಿರ್ವಹಿಸುವ ಪಾತ್ರಗಳು ಜನಮನ್ನಣೆಗಳಿಸಿವೆ.

ಇವರು ಅಭಿನಯಿಸಿದ ನಾಯಕ ನಟನ ಪಾತ್ರ ಹಾಗೂ ಖಳನಾಯಕನ ಪಾತ್ರಕ್ಕೆ ಹಲವು ಬಹುಮಾನಗಳು ದೊರಕಿವೆ. ಇವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಹಾಗೂ ಸನ್ಮಾನಗಳು ಲಭಿಸಿವೆ.

ಶ್ರೀ ರಿಚಾರ್ಡ್ ಕಾಸ್ಟೇಲಿನೋ (ಸಿನಿಮಾ ಕ್ಷೇತ್ರ)

೧೯೪೪ ಮೇ ೩ ರಂದು ಎವರೆಸ್ಟ್ ಕಾಸ್ಟೇಲಿನೋ ಮತ್ತು ಮೊಂತಿ ರೊಡ್ರಿಗಸ್ ದಂಪತಿಗಳ ಮಗನಾಗಿ ಬಂಟ್ವಾಳದ ಕೃಷಿ ಕುಟುಂಬದಲ್ಲಿ ಜನಿಸಿದರು. ಇವರು ೧೯೭೫ ರಲ್ಲಿ ಅರುಣ್ ಕಿರಣ್ ಪ್ರೊಡೆಕ್ಷನ್ ನಾಟಕ ಸಂಸ್ಥೆ ಪ್ರಾರಂಭಿಸಿದರು. ಹಲವಾರು ತುಳು, ಕನ್ನಡ, ಕೊಂಕಣೆ ನಾಟಕ ಹಾಗೂ ಸಂಗೀತ ರಸ ಸಂಜೆ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿರುತ್ತಾರೆ.

೧೯೭೭ ರಲ್ಲಿ ‘ನ್ಯಾಯಗಾದ್ ಎನ್ನ ಬದ್ಕ್’ ತುಳು ಚಲನಚಿತ್ರದ ನಿರ್ಮಾಣ. ‘ಬದಿ’, ಬಂಗಾರ್ ಪಟ್ಲೇರ್ ಎಂಬ ತುಳುಚಲನಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರಾಗಿದ್ದರು. ೧೯೯೪ ರಲ್ಲಿ ‘ಸಪ್ಟೆಂಬರ್ ೮ ಎಂಬ ತುಳು ಚಲನಚಿತ್ರವನ್ನು ೨೪ ಗಂಟೆಗಳಲ್ಲಿ ನಿರ್ಮಿಸಿ, ನಿರ್ದೇಶಿಸಿದ ಕೀರ್ತಿ ರಿಚಾರ್ಡ್ ಕಾಸ್ಟೇಲಿನೊ ಅವರದ್ದು ಇದೊಂದು ದಾಖಲೆ.

ಇವರ ‘ಬಂಗಾರ್ ಪಟ್ಲೇರ್’ ಚಲನಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಹೀಗೆ ಹಲವು ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ಲಭಿಸಿದೆ.