Gramotsava
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆ, ಸಾಹಿತ್ಯ, ಕಲೆ, ಜಾನಪದ ಮತ್ತು ಸಂಸ್ಕೃತಿಯ ಬೆಳವಣಿಗೆಯ ಉದ್ದೇಶದಿಂದ ಕೆಲಸ ನಿರ್ವಹಿಸುತ್ತಾ ಬಂದಿರುತ್ತದೆ. ಅದರಂತೆ ಈ ವರ್ಷ ವಿವಿಧ ತುಳು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆ, ಹಾಗೂ ರಾಜ್ಯದ ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ಯೋಜನೆಯಡಿ ನಡೆಸುತ್ತಾ ಬಂದಿರುತ್ತದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಭಾರತೀ ವಿಕಾಸ ಪ್ರತಿಷ್ಠಾನ (ರಿ) ಮಂಜುನಾಥ ನಗರ ಪಾಲ್ತಾಡಿ ಗ್ರಾಮ ಪುತ್ತೂರು ಇವರ ಸಹಯೋಗದೊಂದಿಗೆ 2011 ಜನವರಿ 4 ಮತ್ತು 5 ಮಂಗಳವಾರ, ಬುಧವಾರ ಎರಡು ದಿನಗಳಂದು ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರ ಮಂಜುನಾಥ ನಗರ, ಪಾಲ್ತಾಡಿ ಗ್ರಾಮ ಪುತ್ತೂರಿನಲ್ಲಿ ಗ್ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾ.04.01.2011ರಂದು ಬೆಳಗ್ಗೆ 9.30 ರಿಂದ ಪ್ರಾರಂಭಗೊಳ್ಳುವ ಗ್ರಾಮೀಣ ಜಾನಪದ ಆಟಗಳ ಉದ್ಘಾಟನೆಯನ್ನು ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಶಿವರಾಮ್ ನೆರವೇರಿಸಲಿರುವರು ಅಧ್ಯಕ್ಷತೆಯನ್ನು ಸುಳ್ಯ ಕ್ಷೇತ್ರದ ಶಾಸಕರಾದ ಶ್ರೀ ಯಸ್ ಅಂಗಾರ ಅವರು ವಹಿಸಿಕೊಳ್ಳಲಿದ್ದ್ದಾರೆ. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಜಿ. ಬಿ. ಬಾಗೇವಾಡಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಧೀರ್ ಕುಮಾರ್ ರೈ, ಶ್ರೀಮತಿ ಸುಂದರಿ ಮತ್ತು ಶ್ರೀ ವಸಂತಿ ಪೂಜಾರಿ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿತರಾಗುವರು.
ಬೆಳಿಗ್ಗೆ 10.30 ರಿಂದ ಕುಂಟೆ ಬಿಲ್ಲೆ, ಕುಟ್ಟಿ ದೊನ್ನೆ, ಕಬಡ್ಡಿ, ಕ್ರಿಕೆಟ್, ಲಗೋರಿ, ಶಕ್ತಿ ಕಲ್ಲು ಎತ್ತುವುದು, ಹಗ್ಗ ಜಗ್ಗಾಟ ಮುಂತಾದ ಜಾನಪದ ಆಟಗಳು ನಡೆಯಲಿವೆ.
ತಾ. 05-01-2011 ರಂದು ಬೆಳಗ್ಗೆ 9.30 ರಿಂದ ಬಾಲಮೇಳದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ನೆರವೇರಿಸಲಿದ್ದಾರೆ. ಪ್ರದರ್ಶನ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರದ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯ ನ್ನು ಮಂಗಳೂರು ಕ್ಯಾಂಪ್ಕೊ ಅಧ್ಯಕ್ಷರಾದ ಶ್ರೀ ಕೊಂಕೋಡಿ ಪದ್ಮನಾಭ ಅವರು ವಹಿಸಿಕೊಳ್ಳಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಿವಣ್ಣ ಗೌಡ ಇಡ್ಯಾಡಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶೇಷಶಯನ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ರಾದ ಶ್ರೀ ಚಂದ್ರಹಾಸ ರೈ ಬಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಧಾ ಎಸ್. ರೈ, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಿಜಯ ಬಿ. ಕೆ, ಶ್ರೀ ಸುದಾಮ ಮಣಿಯಾಣಿ, ಶ್ರೀ ಪಿ. ಎನ್. ಕಿಟ್ಟಣ್ಣ ರೈ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿತರಾಗುವರು.
ತಾ 05-01-2011 ರಂದು ಮದ್ಯಾಹ್ನ 12.00 ರಿಂದ ಗ್ರಾಮೀಣ ಸಂಘಟನೆಗಳ ಕಾರ್ಯಕರ್ತರ ಸಭೆ ನಡೆಯಲಿದ್ದು ಅಧ್ಯಕ್ಷತೆಯನ್ನು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಸ್. ಜಿ. ಕೃಷ್ಣ ವಹಿಸಲಿರುವರು. ಪ್ರಾಂತ್ ಸೇವಾ ಪ್ರಮುಖ್ ಶ್ರೀ ಗೋಪಾಲ ಚೆಟ್ಟಿಯಾರ್ ಮತ್ತು ಕಲ್ಲಾರೆ ಪುತ್ತೂರು ಓಂಕಾರ ಯೋಗ ಮಂದಿರದ ನಿರ್ದೇಶಕರಾದ ಶ್ರೀ ಕೆ ಕರುಣಾಕರ ಉಪಾಧ್ಯಾಯ ಇವರು ಮಾಹಿತಿಗಳನ್ನು ನೀಡಲಿರುವರು.
ಅಪರಾಹ್ನ 2.00 ರಿಂದ ಪ್ರೌಢಾಶಾಲಾ ಮತ್ತು ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಂದ ರಾಮಾಯಣ/ಮಹಾಭಾರತದಿಂದ ಆಯ್ದ ಕಥೆಗಳ ಕಥಾ ಸ್ಪರ್ಧೆಗಳು ನಡೆಯಲಿದೆ. ಹಾಗೂ ಸಂಜೆ 5.00 ರಿಂದ ಶಿಶು ಮಂದಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 5.30 ರಿಂದ ಗ್ರಾಮೋತ್ಸವದ ಸಮಾರೋಪ ಸಮಾರಂಭ ಜರುಗಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಬೆಂಗಳೂರು ಕರ್ನಾಟಕ ಲೋಕಸೇವಾ ಆಯೋಗದ ನಿರ್ದೇಶಕರಾದ ಶ್ರೀ ಎಸ್. ಆರ್. ರಂಗಮೂರ್ತಿ ಇವರು ಸಮಾರೋಪ ಭಾಷಣ ಮಾಡಲಿರುವರು. ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ಶ್ರೀ ಕೆ. ಸೀತಾರಾಮ ರೈ ಸವಣೂರು, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಅರ್ತಿಕೆರೆ ಅಬ್ದುಲ್ ರಹೆಮಾನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಪ್ರೇಮಲತಾ ರಾವ್, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ವೈ . ಶಿವರಾಮಯ್ಯ, ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ರಾಕೇಶ್ ರೈ ಕೆಡೆಂಜಿ ಮತ್ತು ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪಿ ಯತೀಶ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು.
ಪಾಲ್ತಾಡಿ ಗ್ರಾಮವು ಪುತ್ತೂರು ತಾಲೂಕಿನ ಒಂದು ಹಿಂದುಳಿದ ಗ್ರಾಮವಾಗಿದೆ. ಈ ಗ್ರಾಮವು ಎರಡು ಬ್ಲಾಕ್ಗಳನ್ನೊಳಗೊಂಡಿದ್ದು ಪರಸ್ಪರ ಸಂಪರ್ಕದ ಕೊರತೆಯಿದೆ. ಭೌಗೋಳಿಕವಾಗಿ ಗ್ರಾಮದ ರಚನೆ ಸಾರಿಗೆ ಸಂಪರ್ಕ ಮತ್ತು ಪರಸ್ಪರ ವ್ಯವಹಾರಕ್ಕೆ ಅನುಕೂಲವಾಗಿಲ್ಲ. ಈ ಎಲ್ಲಾ ದೃಷ್ಟಿಯಿಂದ ಈ ಗ್ರಾಮದ ಅಭಿವೃದ್ಧಿಯ ಬಗ್ಗೆ ಸರಕಾರ ಹೆಚ್ಚಿನ ಗಮನ ಕೊಡುವ ಉದ್ದೇಶದಿಂದ ಮತ್ತು ಗ್ರಾಮಸ್ಥರನ್ನೆಲ್ಲ ಒಟ್ಟು ಸೇರಿಸಿ ಪರಸ್ಪರ ಭಾವೈಕ್ಯತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಇಲ್ಲಿ ಗ್ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.