Tulu Nadu

ಭಾರತದ ಪಶ್ಚಿಮ ಕರಾವಳಿಯನ್ನು ಪ್ರಾಚೀನ ಕಾಲದಲ್ಲಿ 3 ವಿಭಾಗಗಳನ್ನಾಗಿ ಮಾಡಲಾಗಿತ್ತು ದಕ್ಷಿಣಕ್ಕೆ ಕೇರಳ ಮಧ್ಯೆ ತುಳುನಾಡು ಮತ್ತು ಉತ್ತರಕ್ಕೆ ಕೊಂಕಣ ರಾಮಾಯಣದ ಕಾಲದಲ್ಲಿ ಈ ಮೂರು ರಾಜ್ಯಗಳು ಅಸ್ತಿತ್ವದಲ್ಲಿದ್ದವು ರಾಮಾಯಣದಲ್ಲಿ ಸಹ್ಯಾದ್ರಿಯ ಸಾಲುಗಳ ತಪ್ಪಲಿನಲ್ಲಿರುವ ಈ ಮೂರು ತಗ್ಗುಗಳೆ ಕೇರಳ, ತುಳುನಾಡು ಮತ್ತು ಕೊಂಕಣ. ಮಹಾಭಾರತದ ಕಾಲದಲ್ಲಿಯೂ ಕೂಡ ತುಳುನಾಡಿನ ಅಸ್ತಿತ್ವದ ಉಲ್ಲೇಖವಿದೆ. ಚಂದ್ರ ವಂಶದ ಯಯಾತಿಯ ಮಗನೊಬ್ಬನು ಇಲ್ಲಿಗೆ ಬಂದು ನಾಗಕನ್ಯೆಯರನ್ನು ವಿವಾಹವಾಗಿ ಆಢಳಿತ ನಡೆಸಿದನು ಎಂಬ ವಿಚಾರವಿದೆ ತುಳುನಾಡು ಭರತ ಖಂಡದ ಅತ್ಯಂತ ತಗ್ಗು ಪ್ರದೇಶದಲ್ಲಿರುವುದರಿಂದ ಇದನ್ನು ಪಾತಾಳವೆಂದು, ಇಲ್ಲಿ ಹಾವುಗಳ ಸಂತತಿ ಹೆಚ್ಚಾಗಿರುವುದರಿಂದ ನಾಗಲೋಕವೆಂದು ಕರೆಯುತ್ತಿದ್ದರು. ಇತಿಹಾಸವನನ್ನು ಅವಲೋಕಿಸಿದರೆ ಹರ್ಷವರ್ದನನ ಕಾಲದಲ್ಲಿ ತುಳುನಾಡು ಗೋಕರ್ಣದ ವರೆಗೆ ವಿಸ್ತರಿಸಿತ್ತು ಎಂಬ ವಿಚಾರವನ್ನು ಆತನು ಬರೆದ ನಾಗಾನಂದ ಎಂಬ ನಾಟಕದಿಂದ ಊಹಿಸಬಹುದಾಗಿದೆ ಅಶೋಕ ಚರ್ಕವರ್ತಿಯ ಶಾಸನಗಳಲ್ಲಿ ತುಳುನಾಡನ್ನು – ಸತಿಯ ಪುತ ಎನ್ನಲಾಗಿದೆ ಇದು ಪ್ರಾಕೃತ ಭಾಷೆಯಲ್ಲಿದ್ದು ಬ್ರಾಹ್ಮಿ ಲಿಪಿಯಲ್ಲಿದೆ ಸತಿಯ ಪುತ ಎಂದರೆ ಸಹ್ಯಾದ್ರಿಯ ತಪ್ಪಲು ಪ್ರದೇಶ ಎಂದರ್ಥ. ಇದನ್ನು ಸಂಸ್ಕೃತದಲ್ಲಿ ಸತಿಯ ಪುತ್ರ ಎಂದು ಮಾರ್ಪಾಡು ಮಾಡಿಕೊಳ್ಳಗಾಗಿದೆ. ತುಳು ಜಾನಪದ ಮಹಾಕಾವ್ಯದಲ್ಲಿ ಅತ್ಯಂತ ಪ್ರಸಿದ್ದ ಪಡೆದ ಸಿರಿಯ ಕತೆಯಲ್ಲಿ ಸಿರಿಯ ಪಿತಾಮಹ ಬಿರುಮಾಳ್ವ್ವನ ಅರಮನೆ ಇದ್ದುದು ಸತ್ಯನಾಪುರದಲ್ಲಿ ಎನ್ನಲಾಗಿದೆ ಸತ್ಯನಾಪುರ ಎಂಬ ಹೆಸರು ಕೇವಲ ಒಂದು ಕೇಂದ್ರಕಷ್ಟೇ ಸೀಮಿತವಲ್ಲ ಅದು ತುಳುನಾಡಿಗೆ ಅನ್ವಯಿಸುತ್ತದೆ. ಸತಿಯ ಪುತ್ರ ಎಂಬ ಸಂಸ್ಕೃತದ ಹೆಸರೇ ಸತ್ಯನಾಪುರವಾಗಿ ಪರಿವರ್ತನೆಗೊಂಡಿತೆಂದು ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ರವರು ಅಭಿಪ್ರಾಯ ಪಡುತ್ತಾರೆ (ನಾಗಬೆರ್ಮ -2010) ತುಳುನಾಡಿಗೆ ಪರಶುರಾಮ ಸೃಷ್ಟಿ ಎಂಬ ಇನ್ನೊಂದು ಅನ್ವರ್ಥ ನಾಮವಿದೆ. ಮಹಾಬ್ರಾಹ್ಮಣ ಪರಶುರಾಮನು ತನ್ನ ಅನುಯಾಯಿಗಳ ಆವಾಸಕ್ಕಾಗಿ ಸಹ್ಯಾದ್ರಿಯ ಮೇಲ್ಗಡೆ ನಿಂತು ಸಮುದ್ರ ರಾಜನನ್ನು ಪ್ರಾರ್ಥಿಸಿ ಭೂಮಿಯನ್ನು ಬಿಟ್ಟು ಕೊಡುವಂತೆ ಕೇಳಿದನೆಂದು ತನ್ನ ಕೊಡಲಿಯನ್ನು ಸಮುದ್ರಕ್ಕೆಸೆದು, ಆ ಕೊಡಲಿ ಬಿದ್ದಲ್ಲಿಯವರೆಗೆ ಸಮುದ್ರ ಹಿಂದೆ ಸರಿಯಿತೆಂದು, ಐತಿಹ್ಯಗಳಿವೆ,  ಹೀಗಾಗಿ ತುಳುನಾಡನ್ನು ಪರಶುರಾಮ ಸೃಷ್ಟಿ ಎಂದು ಕೂಡ ಕರೆಯುತ್ತಾರೆ. ಪ್ರಸಿದ್ದ ಇತಿಹಾಸಕಾರ ಡಾ. ಕೆ. ವಿ ರಮೇಶ್ ಅವರು ಹೇಳುವಂತೆ ವೈದಿಕ ಸಂಸ್ಕೃತಿಯು ತುಳುನಾಡನ್ನು ಪ್ರವೇಶಿಸಿದ ಸಂಧರ್ಭವನ್ನು ಈ ಐತಿಹ್ಯವು ಸಾಂಕೇತಿಸುತ್ತದೆ, ಮತ್ತು ಇಲ್ಲಿಗೆ ಆಗಮಿಸಿದ ವೈದಿಕ ಜನಾಂಗದ ನಾಯಕ ಪರಶುರಾಮನು ಕಬ್ಬಿಣದ ಕೊಡಲಿಯನ್ನು ಬಳಸಿ ಇಲ್ಲಿ ಹಬ್ಬಿಕೊಂಡಿದ್ದ ದಟ್ಟವಾದ ಕಾಡನ್ನು ನಾಶಪಡಿಸಿ ಕೃಷಿ ಯೋಗ್ಯವಾಗುವಂತೆ ಮಾಡಿದನೆಂಬುದು ಕೂಡ ಇಲ್ಲಿ ವ್ಯಕ್ತವಾಗುತ್ತದೆ..

ಈ ಪ್ರದೇಶಕ್ಕೆ ತುಳುನಾಡು ಎಂಬ ಹೆಸರು ಬರಲು ಇಲ್ಲಿನ ಮಣ್ಣಿನ ಗುಣವೇ ಕಾರಣ. ದಟ್ಟವಾದ ಕಾಡು ಹಬ್ಬಿದ್ದರಿಂದ ಇಲ್ಲಿನ ವಾತಾವರಣ ಸದಾ ಆದ್ರವಾಗಿರುತ್ತಿತ್ತು ವರ್ಷದ ಹೆಚ್ಚಿನ ದಿನಗಳಲ್ಲಿ ಮಳೆ ಸುರಿಯತ್ತಿತ್ತು. ಇಲ್ಲಿನ ಭೂಮಿ ಮೆತ್ತಗಾಗಿ ಇರುತ್ತಿದ್ದುದರಿಂದ ಈ ನಾಡನ್ನು ತುಳುನಾಡು ಎಂದು ಕರೆದರು. ತುಳು ಎಂದರೆ ಮೆತ್ತಗೆ, ನೀರಿನಿಂದ ಆವೃತವಾದ, ಆದ್ರ, ನೀರನ್ನು ಹೊರಸೂಸುವ ಎಂಬ ಅರ್ಥಗಳು ಇವೆ. ತುಳುನಾಡು ಎಂಬ ಹೆಸರು ಮೊತ್ತಮೊದಲು ನಮಗೆ ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. 2ನೇ ಶತಮಾನದ ಮಧ್ಯಭಾಗದೆನ್ನಲಾದ ತಮಿಳು ಸಂಗಮ ಸಾಹಿತ್ಯದಲ್ಲಿ ದೊರೆಯತ್ತದೆ. ಇದು ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನವಾದ ಲಿಖಿತ ಸಾಹಿತ್ಯ. ಇಲ್ಲಿ ಕೋಶರ್ ಎಂಬ ಜನಾಂಗದವರಿದ್ದರು ಅವರು ಬಲಿಷ್ಠರಾಗಿದ್ದರು ತಮಿಳು ರಾಜರ ಕೈಕೆಳಗೆ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತುಳುನಾಡು ಸುಂದರವಾದ ವನ ಪ್ರದೇಶಗಳಿಂದ ತುಂಬಿತ್ತು ಈ ವನದಲ್ಲಿ ಹೂ ಹಣ್ಣುಗಳಿಂದ ತುಂಬಿದ ಮರಗಳಿದ್ದವು. ವನಗಳ ಮಧ್ಯೆ ನವಿಲುಗಳು ನಲಿದಾಡುತ್ತಿದ್ದವು. ಇಲ್ಲಿನ ಮಹಿಳೆಯರು ಸುಂದರಿಯರಾಗಿದ್ದು ಅಲಂಕಾರ ಪ್ರಿಯರಾಗಿದ್ದರು ಚಿನ್ನದ ಆಭರಣಗಳು ಅವರಿಗೆ ಅತ್ಯಂತ ಪ್ರಿಯವಾಗಿದ್ದವು, ಎಂಬಿತ್ಯಾದಿ ವಿಚಾರಗಳು ಸಂಗಮ ಸಾಹಿತ್ಯದಲ್ಲಿ ಉಲ್ಲೇಖಿತವಾಗಿದೆ, ಮಳೆಯಾಳಂ ಜನಪದ ಸಾಹಿತ್ಯದಲ್ಲಿ ಹಾಗೂ ತುಳು ಪಾಡ್ದನಗಳಲ್ಲಿ ಕೇರಳದ ಬಡಗರದಿಂದ ಉತ್ತರದ ಅಂಕೋಲೆಯವರೆಗೆ ತುಳುನಾಡು ವ್ಯಾಪಿಸಿತ್ತು, ಎಂದು ಹೇಳಲಾಗಿದೆ. 7ನೇ ಶತಮಾನದಲ್ಲಿ ರಚಿಸಲಾಗಿದೆ ಎನ್ನಲಾದ ನಾಗರಖಂಡ ಗ್ರಂಥದಲ್ಲಿ ತುಳುನಾಡನ್ನು ನಾಗರಖಂಡವೆಂದು ಕರೆಯಲಾಗಿದೆ. ಆಗಿನ ಕಾಲದಲ್ಲಿ ತುಳುನಾಡು ಕೇವಲ ಕರಾವಳಿ ಪ್ರದೇಶವನ್ನಲ್ಲದೆ ಉತ್ತರಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಒಂದು ಭಾಗವನ್ನು ಕೂಡ ವ್ಯಾಪಿಸಿಕೊಂಡಿದ್ದ ವಿಚಾರ ತಿಳಿದು ಬರುತ್ತದೆ ಬ್ರಿಟಿಷರ ಆಗಮನದ ಬಳಿಕ ಕರಾವಳಿ ಕರ್ನಾಟಕವನ್ನು ಕೆನರ ಎಂದು ಹೆಸರಿಸಿ ಒಂದು ಪ್ರಾಂತ್ಯವಾಗಿ ಮಾರ್ಪಡಿಸಿದರು, ಬಳಿಕ ಅದನ್ನು 2 ವಿಭಾಗಗಳನ್ನಾಗಿ ಮಾಡಿ ಸೌತ್ ಕೆನರ ಮತ್ತು ನಾರ್ತ್ ಕೆನರ ಎಂಬುದಾಗಿ ವಿಂಗಡಿಸಿದರು. 1956 ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಸೌತ್ ಕೆನರಾದ ಒಂದು ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಮುಂದೆ 26/08/1997 ನಲ್ಲಿ ದಕ್ಷಿಣ ಕನ್ನಡವು ಕೂಡ ಉಡುಪಿ ಮತ್ತು ದಕ್ಷಿಣ ಕನ್ನಡ ಎಂಬ 2 ಜಿಲ್ಲೆಗಳಾಗಿ ವಿಭಜನೆಗೊಂಡವು, ರಾಜಕೀಯವಾಗಿ ತುಳುನಾಡಿಗೆ ನಿರ್ದಿಷ್ಠವಾದ ಗಡಿಗಳಾಗಲಿ, ಕೊಟೆ ಕೊತ್ತಲಗಳಾಗಲಿ ಎಂದೂ ನಿರ್ಮಾಣ ಗೊಂಡಿರಲಿಲ್ಲ, ಆದರೆ ಸಾಂಸ್ಕೃತಿಕವಾಗಿ, ಬೌಗೋಳಿಕವಾಗಿ, ಜನರಿಂದಲೇ ಬಹು ಪ್ರಾಚೀನ ಕಾಲದಿಂದಲೂ ತುಳುನಾಡು ಜನರ ಆಡು ಮಾತಿನಲ್ಲಿ ಪ್ರಚಲಿತವಿತ್ತು ಸಾಹಿತ್ಯದಲ್ಲಿ ಉಲ್ಲೇಖನಗೊಳ್ಳುತ್ತಿತ್ತು..